ಅಜ್ಜಿಯ ಕಥೆಗಳು

ಹಿಂತಿರುಗಿ ನನ್ನ ಬಾಲ್ಯದತ್ತ ನಾನು ನೋಡಿದಾಗ, ಬಹಳ ನೆನಪುಗಳು ಬರುವವು. ಅದರಲ್ಲಿ ಅತಿ ಹೆಚ್ಚು ಪ್ರಿಯವಾದುದರಲ್ಲಿ ಒಂದು ಕಥೆಗಳು. ಈ ಕಥೆಗಳ ಪಯಣ ನನಗೆ ಬಲು ಚಿಕ್ಕ ವಯಸ್ಸಿನಿಂದಲೇ ಶುರುವಾಯಿತು. ಕಾರಣ ನನ್ನ ಅಜ್ಜಿ ನಂತರ ನನ್ನ ಅಮ್ಮ. ಈಗ ನನ್ನ ಅಣ್ಣನ ಮಗನನ್ನು ಹಾಗು ನನ್ನ ತಾಯಿಯನ್ನು ಅಂದರೆ ಅವನ ಅಜ್ಜಿಯನ್ನು ನೋಡಿದಾಗ ನನಗೆ ನನ್ನ ಬಾಲ್ಯದ ನೆನಪು ಕಾಡುತ್ತದೆ. ಮೊಮ್ಮಗ ಹಾಗು ಅಜ್ಜಿಯ ಮಧ್ಯೆ ಇರುವ ಸಂಬಂಧ ತುಂಬ ವಿಭಿನ್ನ, ಊಹಿಸಿಕೊಳ್ಳಲಾಗದಷ್ಟು. ಅವರಿಬ್ಬರ ಮಧ್ಯೆ ಇರುವ ಸಲಿಗೆ ಇನ್ಯಾರ ಮಧ್ಯೆಯು ಇರಲು ಅಸಾಧ್ಯವೆನಿಸಿದೆ ನನಗೆ. ಈಗಲು ಮೊನ್ನೆ ನನಗೆ ನನ್ನ ಹೆಂಡತಿ ಕೇಳಿದಳು ನಿನಗೆ ಬಹಳ ಪ್ರಿಯವಾದವರು ಯಾರು ಇಲ್ಲಿ, ನಾನು ಥಟ್ಟನೆ ಹೇಳಿದೆ ನನ್ನ ಅಜ್ಜಿ. ಬಹುಷಃ ಅವಳು ತನ್ನ ಹೆಸರು ಬಯಸಿದ್ದಳೊ ಎನೋ. 


ನನ್ನ ಅಜ್ಜಿ ತುಂಬಾ ಓದಿಲ್ಲ ಅಂದ್ರುನೂ, ಬಹಳ ವಿಷಯಗಳನ್ನು ತಿಳಿದಿವರು, ಕಾರಣ ನನ್ನ ತಾತನ ಸಹವಾಸ. ನನ್ನ ಅಜ್ಜಿ ಬಹಳ ಅಂತಕರಣದ ಜೀವಿ, ಯಾರನ್ನು ಎಂದಿಗೂ ದ್ವೇಶಿಸಿದವರಲ್ಲ, ಅಸೂಯೆ ಪಟ್ಟವರಲ್ಲ. ಯಾರನ್ನೇ ಆಗಲಿ ಬಲು ಪ್ರೀತಿಯಿಂದ ಮಾತನಾಡಿಸುತ್ತಾರೆ. ಅದೇ ಸ್ವಭಾವ ನಂಗು ಬಂದಿದೆ. ಜನರನ್ನ ದ್ವೇಶಿಸುವುದಾಗಲಿ ಅಥವಾ ಅವರ ಬಗ್ಗೆ ಏನಾದರು ನಮ್ಮೊಳಗೆ ಮಾತನಾಡಿಕೊಳ್ಳುವುದು ಬಹಳ ಕಷ್ಟ. ಆದರೂ ಕೆಲವೊಮ್ಮೆ ನನ್ನ ಅಹಂ ಗೆ ಧಕ್ಕೆ ಬಂದಾಗ ನಾನು ಬೇರೆಯವರ ಬಗ್ಗೆ ದೂಷಿಸುವುದುಂಟು. ಇದನ್ನು ನಾನು ಬರೆಯುತ್ತಿರುವುದು ಅಮೆರಿಕಾದಿಂದ, ಇಲ್ಲಿಗೆ ಬಂದು ಬಹಳ ದಿನಗಳಾದವು, ಕೆಲ ದಿನಗಳಿಂದ ನನ್ನ ಅಜ್ಜಿಯ ನೆನಪು ನನಗೆ ತುಂಬಾ ಕಾಡುತ್ತಿದೆ. ಯಾರಲ್ಲೂ ಹೇಳಲಾರದಷ್ಟು ನೆನಪುಗಳು ಹಾಗು ಅವರೊಡನೆ ಇರಬೇಕು, ನೋಡಬೇಕೆಂಬ ಆಸೆ. 
'ಮೂರು ವರ್ಷದ ಬುಧ್ಧಿ ನೂರು ವರ್ಷದ ವರೆಗೆ
ಎಂಬ ಗಾದೆಯಂತೆ, ನನ್ನ ಕೆಲವು ಸ್ವಭಾವಗಳು ನನ್ನ ಅಜ್ಜಿಯಂತೆ ಏಕೆಂದರೆ ನಾನು ನನ್ನ ಮೊದಲ ಮೂರು ವರ್ಷಗಳನ್ನು ಅವರೊಡನೆ ಕಳೆದದ್ದು. ಅಮ್ಮ ಅಪ್ಪನ ನೆನಪು ಸ್ವಲ್ಪವೂ ಬರದಂತೆ ಬಲು ಪ್ರೀತಿಯಿಂದ ನನ್ನನ್ನು ಬೆಳಸಿದರು. ಅವರ ಕಥೆಗಳಲ್ಲಿ ನೀತಿ ಪಾಠಗಳು ಹಲವಾರು. ಅಜ್ಜಿಯ ಪ್ರೀತಿ ಹಾಗು ತಾತನ ಶಿಸ್ಥಿನಲ್ಲೇ ಬೆಳೆದೆ. ಈ ನೆನಪಿನಲ್ಲೇ ಬರೆದ ಹಲವು ಸಾಲುಗಳು ಹಾಗು ಒಂದು ಫೋಟೋ. 

ಹೊಸಪೇಟೆಯ ನೆನಪು 
ನನ್ನ ಬಾಲ್ಯದ ಹೊಳಪು 
ನನ್ನ ಅಜ್ಜಿಯ ಕಥೆಗಳು 
ನನ್ನ ತಾತನ ಪಾಠಗಳು 
ಅಲ್ಲಿನ ಗೆಳೆಯರ ಜೊತೆಗಿನ ಆಟ 
ಅಜ್ಜಿಯ ಕೈ ತುತ್ತಿನ ಊಟ 
ತುಂಗಭದ್ರ ಡ್ಯಾಮ್ ನ ವೈಶಿಶ್ಟ್ಯ 
ಅಲ್ಲಿ ಸಂಗೀತ ಕಾರಂಜಿಯ ದೃಶ್ಯ  
ನೆನಪಾಗಿದೆ ಇಂದು, ಇದು ಸರಿಯೇ? 
ಕಾರಣವೇನೆಂದು ನಾನರಿಯೆ

ಕಪ್ಪು ಅಂಗಿಯಲ್ಲಿ ತಾತ ಹಾಗು ಅಜ್ಜಿಯ ಜೊತೆ ನಾನು, ಪಕ್ಕದಲ್ಲಿ ನನ್ನ ಅಮ್ಮ ಹಾಗು ಅವರ ತಂಗಿ ಮತ್ತು ಅವರ ಇಬರು ಮಕ್ಕಳು

Labels: ,