ನಾ ಹೋಗುವ ದಾರಿಯಲಿ

ನಾ ಹೋಗುವ ದಾರಿಯಲಿ 
ಕಂಡೆ ತಿರುವೊಂದನು 
ಮೊದಲನೇ ಭೇಟಿಯಲಿ 
ಕಂಡೆ ಚಂದದ ಮೊಗವಂದನು 

ಆ ತಿರುವಲೇ ಕುಳಿತಿಹೆ ಇನ್ನು 
ಕಾಯುತ ಆ ಮೊಗದ ನಗುವ 
ಎಷ್ಟು ಬರೆದರೂ ಬರೆಯಲೇಬೇಕಿನ್ನು 
ಹೇಗೆ ವರ್ಣಿಸಲಿ ಅವಳ ಚೆಲುವ 


ದೂರದಲ್ಲಿ ಅವಳು ನಿಂತಹಾಗೆ 
ಬೇಲೂರು ಹಳೇಬೀಡಿನ ಶಿಲೆಯಂತೆ 
ನನ್ನನ್ನೇ ನೋಡುತಿರುವಹಾಗೆ 
ಇವನೇಕೆ ಇಲ್ಲಿ ಬಂದ ಎನ್ನುವಂತೆ 

ಅವಳ ಹೆಜ್ಜೆ ಗುರುತು ನಾ ನೋಡಿದೆ 
ಪಕ್ಕದಲ್ಲೇ ನನ್ನ ಹೆಜ್ಜೆಯನಿಟ್ಟೆ 
ಇಂಪಾದ ಗೆಜ್ಜೆಯ ಸದ್ದು ನಾ ಕೇಳಿದೆ 
ಅವಳಲ್ಲೇ ನನ್ನ ಮನಸನಿಟ್ಟೆ  

ಇಂದು ನೆನೆಯುತಾ ಆ ದಿನಗಳನ್ನು 
ಮರೆಯಲಾರದ ಕ್ಷಣಗಳವು ಸಾವಿರಾರು
ಬರೆದಿಹೆ ಈ ನಾಕು ಸಾಲುಗಳನ್ನು 
ನಿಂತು ಅವಳ ಹೂಮಾಲೆ ಭರಿತ ಚಿತ್ರದೆದುರು 

Labels: ,